
'ಬೇರ' ಎಂಬ 'ಬೇರೆಯದೇ' ಚಿತ್ರ
‘Bera’, a Kannada film that explores the manipulation of innocent individuals by political leaders from opposing religions, emphasizing the need to protect young minds from becoming pawns in the game of politics, releases on June 16.
English version: Kannada film ‘Bera’ explores religious terrorism in coastal Karnataka
ಕರ್ನಾಟಕ ಕರಾವಳಿ ತೀರದಲ್ಲಿ ಕಳೆದ ಮೂರು ದಶಕಗಳಲ್ಲಿ ಕಾಣಿಸಿಕೊಂಡಿರುವ ಕೋಮು ಸಂಘರ್ಷದ ಕಥನ ‘ಬೇರ’. ಈ ಚಿತ್ರವನ್ನು ಈಗಾಗಲೇ ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳು “ದಿ ಕಾಶ್ಮೀರ್ ಫೈಲ್ಸ್”, “ಕೇರಳ ಸ್ಟೋರಿ” ಬಳಿಕ ಇದೀಗ ’ಕರಾವಳಿ ಸ್ಟೋರಿ!’ ಎಂದು ಬಿಂಬಿಸುತ್ತಿರುವ ಕಾರಣ; ಸುದ್ದಿಯಲ್ಲಿದೆ.ಪ್ರೇಕ್ಷಕರಷ್ಟೇ ಅಲ್ಲದೆ ಆ ಎರಡೂ ಚಿತ್ರಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡವರು. ’ಬೇರ’ ಚಿತ್ರವನ್ನೂ ಬಳಸಿಕೊಳ್ಳಬಹುದು ಎಂಬ ಆತಂಕ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶುಕ್ರವಾರ ಬಿಡುಗಡೆಯಾಗಲಿರುವ ಈ ಚಿತ್ರ ಮಹತ್ವ ಪಡೆದುಕೊಂಡಿದೆ
ಮುರಳೀಧರ ಖಜಾನೆ
ಕನ್ನಡ ಚಿತ್ರಲೋಕದಲ್ಲಿ ವಾರವೊಂದಕ್ಕೆ ಕನಿಷ್ಠ ಮೂರು ಚಿತ್ರಗಳಾದರೂ ಬಿಡುಗಡೆಯಾಗುತ್ತವೆ. ಚಿತ್ರದಲ್ಲಿನ ತಾರಾ-ವರ್ಚಸ್ಸು ಮತ್ತು ಆ ಚಿತ್ರದ ಬಜೆಟ್ ಆಧರಿಸಿ ಅವುಗಳು ಸುದ್ದಿಯಲ್ಲಿರುತ್ತವೆ ಮತ್ತು ಸುದ್ದಿ ಮಾಡುತ್ತಲಿರುತ್ತವೆ. ಅವುಗಳ ಗಲ್ಲಾಪೆಟ್ಟಿಗೆ ಯಶಸ್ಸಿಗೆ ಕೂಡ ಇವೇ ಮಾನದಂಡವನ್ನು ಅವಲಂಬಿಸಿದೆಯೇ ಹೊರತು, ಅವುಗಳ ಕಥನದಿಂದಾಗಲೀ, ಸಮಕಾಲೀನತೆಯಿಂದಾಗಲೀ, ಸುದ್ದಿಯಲ್ಲಿರುವುದಿಲ್ಲ. ಅಂಥ ಚಿತ್ತಗಳು ಅಕಸ್ಮಿಕವಾಗಿ ಬಂದರೂ ಅವುಗಳು ಅಂತಾರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಸೀಮಿತವಾಗಿಬಿಡುತ್ತವೆ. ಚಿತ್ರರಂಗದ ಲೆಕ್ಕಾಚಾರದ ಪ್ರಕಾರ ಜೂನ್ ತಿಂಗಳ ಮೊದಲ ವಾರದವರೆಗೆ ಕನ್ನಡ ಚಿತ್ರರಂಗದಲ್ಲಿ ನೂರಾಮೂರು ಚಿತ್ರಗಳು ಬಿಡುಗಡೆಯಾಗಿದ್ದರೆ, ಅವುಗಳ ಪೈಕಿ ಯಶಸ್ವಿ ಚಿತ್ರಗಳ ಸಂಖ್ಯೆ ನಾಲ್ಕೈದು ಮಾತ್ರವೇ.
ಈ ಪುಟ್ಟ ಪ್ರಸ್ತಾವನೆಗೆ ಕಾರಣ ಜೂನ್ ೧೬ ರಂದು ತೆರೆಕಾಣಲಿರುವ ‘ಬೇರ’ ಎಂಬ ಕನ್ನಡ ಚಿತ್ರ ಮತ್ತು ಅದರ ಟ್ಯಾಗ್-ಲೈನ್ (ಬಾಲಂಗೋಚಿ)-’ಮರ್ಚೆಂಟ್ ಆಫ್ ಡೆತ್’. ಈ ಚಿತ್ರ ತನ್ನ ವಸ್ತುವಿನ (ಕಂಟೆಂಟ್) ಕಾರಣದಿಂದಾಗಿ ಬಿಡುಗಡೆಗೆ ಮುನ್ನವೇ ಸದ್ದು-ಸುದ್ದಿ ಎರಡನ್ನೂ ಸಮಾನವಾಗಿ ಮಾಡುತ್ತಿದೆ. ‘ಬೇರ’ ಎಂದರೆ ತುಳು ಭಾಷೆಯಲ್ಲಿ ‘ವ್ಯಾಪಾರ’ ಎಂದರ್ಥ. ವಿನು ಬಳಂಜ ಎಂಬ ಚೊಚ್ಚಲು ನಿರ್ದೇಶಕನ ಚಿತ್ರ ಇದು. ಈ ಸಮಾಜೋ-ರಾಜಕೀಯ ಚಿತ್ರ ’ಬೇರ’ -ಉತ್ತರ ಭಾರತದ ’ಹಿಂದುತ್ವದ ಪ್ರಯೋಗಶಾಲೆ’ ಎಂದು ಭಾವಿಸಲಾಗಿರುವ ಕರಾವಳಿ ಕರ್ನಾಟಕದಲ್ಲಿ ರಾಜಕಾರಣ, ಅದರಲ್ಲೂ ಮತೀಯ ಶಕ್ತಿಯ ರಾಜಕಾರಣ- ಒಂದು ಕಾಲದ ಸರ್ವಜನಾಂಗದ ಶಾಂತಿಯ ತೋಟವನ್ನು ಹೇಗೆ ಅಶಾಂತಿಯ ತಾಣವನ್ನಾಗಿ ಮಾರ್ಪಡಿಸುತ್ತಿದೆ ಎಂಬ ವಸ್ತುವನ್ನಾಧರಿಸಿದ್ದು ಎನ್ನಲಾಗುತ್ತಿದೆ.
“ದಿ ಕಾಶ್ಮೀರ್ ಫೈಲ್ಸ್”, “ಕೇರಳ ಸ್ಟೋರಿ” ಹೋಲಿಕೆ?
‘ಬೇರ’ ಸದ್ದು ಮತ್ತು ಸುದ್ದಿ ಮಾಡಲು ಕಾರಣ; ಬಿಡುಗಡೆಗೆ ಮುನ್ನವೇ “ಈ ಚಿತ್ರವನ್ನು ಕೆಲ ಕನ್ನಡದ ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳು- “ದಿ ಕಾಶ್ಮೀರ್ ಫೈಲ್ಸ್”, “ಕೇರಳ ಸ್ಟೋರಿ” ಬಳಿಕ ಇದೀಗ ’ಕರಾವಳಿ ಸ್ಟೋರಿ!’ ಎಂಬ ತಲೆಬರಹ ನೀಡಿ, “ಇದು ಹಿಂದೂ-ಮುಸ್ಲೀಮ್ ಸಂಘರ್ಷದ ಕತೆಯ ಚಿತ್ರ ಇದು. ಕೋಮು ಸಂಘರ್ಷದ ಜೊತೆಗೆ ಉಗ್ರವಾದದ ಕತೆಯೂ ಇದರಲ್ಲಿದೆ ಕರ್ನಾಟಕ ಕರಾವಳಿಯ ನೈಜ ಕೋಮು ಸಂಘರ್ಷದ ಕತೆಯನ್ನಾಧರಿಸಿದ ಚಿತ್ರ” ಎಂದು ಬಿಂಬಿಸುತ್ತಿರುವುದು. ಮರ್ಚೆಂಟ್ ಆಫ್ ಡೆತ್- ಅಂದರೆ ’ಸಾವಿನ ವ್ಯಾಪಾರಿ’ ಎಂಬುದು ಕನ್ನಡದ ಚಿತ್ರ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನುಂಟುಮಾಡಿದೆ. ಹಿಂದೂ-ಮುಸ್ಲೀಂ ಧರ್ಮಗಳ ಅಮಾಯಕ, ಅಸಹಾಯಕ, ಮುಗ್ಧ ಯುವಕರನ್ನು ಈ ಧರ್ಮಗಳ ಸಿದ್ಧಾಂತಗಳನ್ನು ಪ್ರತಿಪಾದಿಸುವ ನಾಯಕರು ಹೇಗೆ ತಮ್ಮ ವಸ್ತುಸೂಚಿಯ ಈಡೇರಿಕೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಈ ಚಿತ್ರದ ಹುರುಳು ಎಂದು ಚಿತ್ರತಂಡದ ಮೂಲಗಳು ಹೇಳುತ್ತಿವೆ. ಇತ್ತೀಚೆಗೆ ಬಿಡುಗಡೆಯಾಗಿರುವ ’ಬೇರ’ದ ಟ್ರೈಲರ್ ಪ್ರೇಕ್ಷಕರ ಕುತೂಹಲಕ್ಕೆ ಕುಮ್ಮಕ್ಕು ನೀಡುತ್ತಿದೆ.
ಸಿದ್ಧಾಂತ ಪ್ರಚಾರಕ ಚಿತ್ರವೇ?
ಆದರೆ ಆ ಎರಡು ಸಿದ್ಧಾಂತ ಪ್ರಚಾರಕ ಚಿತ್ರಗಳೆಂಬ ಪ್ರಬೇಧಕ್ಕೆ ಸೇರುವ ಸಾಧ್ಯತೆಯೇ ಹೆಚ್ಚು. ಈ ಚಿತ್ರಕ್ಕೆ ಸಿಗುತ್ತಿರುವ ಪ್ರಾಶಸ್ತ್ಯವನ್ನು ಗಮನಿಸಿದರೆ, ’ಬೇರ’ಕೂಡ ಅದೇ ಹಾದಿಯಲ್ಲಿ ಸಾಗುವುದೇನೋ ಎಂಬ ಅನುಮಾನ ಪ್ರೇಕ್ಷಕರನ್ನು ಕಾಡುತ್ತಿದೆ. “ಈ ರೀತಿಯ ಪ್ರಚಾರ ಚಿತ್ರದ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮ ಎರಡನ್ನೂ ಮಾಡುವ ಸಾಧ್ಯತೆ ಇದೆ” ಎಂದು ನಿರ್ದೇಶಕ ವಿನು ಬಳಂಜ ಒಪ್ಪಿಕೊಳ್ಳುತ್ತಾರೆ. ಆದರೆ ’ಬೇರ’ ಧರ್ಮಾಧಾರಿತ ರಾಜಕಾರಣ ಉದ್ದೇಶದ ರಾಜಕಾರಣಿಗಳು ಮುಗ್ಧ, ಅಮಾಯಕ, ಆರ್ಥಿಕವಾಗಿ ಅಸಹಾಯಕರಾಗಿರುವ ಯುವಕರನ್ನು ಧರ್ಮದ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಸ್ತುವನ್ನಾಧರಿಸಿದ ಕಥೆ ಇದು. “ಕರ್ನಾಟಕ ಕರಾವಳಿ ತೀರ ಪ್ರದೇಶದ ಮುಗ್ಧ ಯುವಕರನ್ನು ಧರ್ಮದ ಹೆಸರಿನಲ್ಲಿ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ಬಳಸಿಕೊಳ್ಳುತ್ತಿರುವುದನ್ನು, ಈ ಮೂಲಕ ಕೋಮು-ಸೌಹಾರ್ದಕ್ಕೆ ಧಕ್ಕೆ ತರುತ್ತಿರುವುದರ ಪರಿಣಾಮವನ್ನು ಹೇಳುವ ಚಿತ್ರವಿದು’ ಎನ್ನುವುದು ನಿರ್ದೇಶಕರ ಸಮರ್ಥನೆ.
ಕರ್ನಾಟಕದ ಗಡಿಯ 320 ಕಿ.ಮೀ ಉದ್ದದ ಕರಾವಳಿ ತೀರದ ಇತ್ತೀಚಿನ ಮೂರು ದಶಕಗಳ ವಿದ್ಯಮಾನಗಳನ್ನ ನೆನಪಿಸಿಕೊಂಡತೆ ವಿನು ಬಳಂಜ ಅವರ ಈ ಮಾತುಗಳ ಅರ್ಥ ಹೊಳೆಯುತ್ತದೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣದಿಂದಾಗಿ ಕರಾವಳಿಯಲ್ಲಿ ಮತೀಯ ಬಣ್ಣದ ಸಂಘರ್ಷಗಳು ನಡೆಯದೇ ಇರುವ ದಿನವೇ ಇಲ್ಲ ಎನ್ನುವಂತಾಗಿದೆ. ಈ ಚಿತ್ರದ ಮತ್ತೊಂದು ಕಾರಣಕ್ಕೆ ಮುಖ್ಯವಾಗುತ್ತದೆ. ಅನುಭವಿ ಹಾಗೂ ಸೂಕ್ಷ್ಮ ಮನಸ್ಸಿನ ಕಲಾವಿದರು ಈ ಚಿತ್ರದ ಭಾಗವಾಗಿದ್ದಾರೆ. “ಸತ್ಯ ಘಟನೆಗಳನ್ನಾಧರಿಸಿದ ಚಿತ್ರವಿದು” ಎಂದು ಚಿತ್ರದ ಮುಖ್ಯ ಕಲಾವಿದೆ ಹರ್ಷಿಕಾ ಪೂಣಚ್ಛ ಹೇಳಿರುವುದು ಹಾಗೂ “ಚಿತ್ರದಲ್ಲಿ ಬಳಸಿರುವ ದಕ್ಷಿಣ ಕನ್ನಡದ ಕಲ್ಲಡ್ಕ ಭಾಗದ ಭಾಷೆ ಚಿತ್ರ ಕಥೆಗೆ ಪೂರಕವಾಗಿದೆ” ಎಂದು ಮತ್ತೊಬ್ಬ ಪಾತ್ರಧಾರಿ ದತ್ತಣ್ಣ ಹೇಳಿರುವುದು,’ಬೇರ’ ದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಕಲ್ಲಡ್ಕ ಕಟ್ಟಿರುವ ಕುತೂಹಲ
ಚಿತ್ರದ ಬಹುಭಾಗವನ್ನು ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿ ಚಿತ್ರಿಸಲಾಗಿದೆ. ಕಲ್ಲಡ್ಕ ಒಂದರ್ಥದಲ್ಲಿ ದಕ್ಷಿಣ ಕನ್ನಡದ ಕೋಮು ಸಂಘರ್ಷದ ಕುದಿಬಿಂದುವೆಂದರೂ ತಪ್ಪಾಗಲಾರದು. ಏಕೆಂದರೆ, ಆರ್‌ಎಸ್‌ಎಸ್‌ನ ನಾಯಕರಾದ ಕಲ್ಲಡ್ಕ ಪ್ರಭಾಕರ ಭಟ್ ಹಿಂದೂ-ಮುಸ್ಲೀಂ ಜನಾಂಗಗಳ ನಡುವೆ ಕೋಮು ಭಾವನೆಗಳನ್ನೂ ಕೆರಳಿಸುವ ಉಭಯ ಕೋಮುಗಳ ನಡುವೆ ಸಂಘರ್ಷ ಹುಟ್ಟಿಹಾಕುವ ಸಂಘ ಪರಿವಾರದ ಸಿದ್ಧಾಂತವಾದಿ ಎಂದೆ ’ಖ್ಯಾತ’ರಾಗಿರುವವರು. ’ಬೇರ’ ಚಿತ್ರವನ್ನು ಪ್ರಾದೇಶಿಕ ಕೋಮು ಸಂಘರ್ಷವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದ ಮೊದಲ ಕನ್ನಡ ಚಿತ್ರವೆಂದು ಕೆಲವರು ಹೇಳುತ್ತಿರುವು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಇದೆ. “ಹಾಗೇನೂ ಇಲ್ಲ. ಈ ಹಿಂದೆ ’ಬರ’ (ಯು.ಆರ್.ಆನಂತಮೂರ್ತಿ ಅವರ ನೀಳ್ಗತೆ ಆಧಾರಿತ) ಚಿತ್ರದಲ್ಲಿ ಎಂ.ಎಸ್. ಸತ್ಯು, ಅಗ್ನಿ ಶ್ರೀಧರ್ ಅವರು ತಮ್ಮ ’ತಮಸ್ಸು’ ಚಿತ್ರದಲ್ಲಿ ಹಾಗೂ ಗಿರೀಶ್ ಕಾಸರವಳ್ಳಿ ಅವರು ತಮ್ಮ ’ಗುಲಾಬಿ ಟಾಕೀಸ್’ ನಲ್ಲಿ ಅತಿ ಸೂಕ್ಷಮವಾಗಿ ಯಾರ ಯಾವ ಭಾವನೆಗಳನ್ನೂ ಕೆರಳಿಸದಂತೆ ಕೋಮು ಸೌಹಾರ್ದದ ಚಿತ್ರಣ ನೀಡಿದ್ದಾರೆ” ಎಂಬುದು ಕನ್ನಡ ಚಲನಚಿತ್ರ ಇತಿಹಾಸಕಾರ ಕೆ.ಪುಟ್ಟಸ್ವಾಮಿ ಅವರ ಅನಿಸಿಕೆ. ಹಾಗಾಗೆ ವಿನು ಬಳಂಜ, ಇಂಥ ss ಸೂಕ್ಷ್ಮ – ಕತ್ತಿಯ ಅಲುಗಿನ ಮೇಲೆ ನಡೆಯುವಂಥ ವಸ್ತುವನ್ನು ಹೇಗೆ ನಿರ್ವಹಿಸಿದ್ದಾರೆ ಎಂಬ ಕುತೂಹಲವೂ ಇದೆ.
ಹಾಗೆಂದು ವಿನು ಬಳಂಜ ಅವರಿಗೆ ದೃಶ್ಯ ಮಾಧ್ಯಮ ಹೊಸದೇನಲ್ಲ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನೂ ನಿರ್ದೇಶಿಸಿ ಮೆಚ್ಚಿಗೆ ಗಳಿಸಿರುವ ಇವರು ಟಿ.ಎನ್ ಸೀತಾರಾಮ್ ಅವರಿಂದ ನಿರ್ದೇಶನದ ಕಸುಬು ಕಲಿತವರು. ನಾಲ್ಕು ವರ್ಷದ ಹಿಂದೆ ರಿಷಭ್ ಶೆಟ್ಟಿ ಅವರನ್ನು ನಾಯಕರಾಗಿಸಿ ’ನಾಥೂರಾಮ್’ ಎಂಬ ಚಿತ್ರ ಮಾಡಲು ಪ್ರಯತ್ನಿಸಿದರು. (ಆದರೆ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಗೂ ಈ ನಾಥೂರಾಮನಿಗೂ ಯಾವುದೇ ಸಂಬಂಧವಿಲ್ಲ, ಈ ನಾಥೂರಾಮ್ ಗಾಂಧಿ ತತ್ವ-ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ ವ್ಯಕ್ತಿ.) ಆದರೆ ಕಾರಣಾಂತರದಿಂದ ಈ ಚಿತ್ರ ಪೂರ್ತಿಮಾಡಲಾಗಲಿಲ್ಲ. ಹಾಗಾಗಿ ’ಬೇರ’ ಇವರ ನಿರ್ದೇಶನದ ಮೊದಲ ಚಿತ್ರ. “ನಾಲ್ಕು ವರ್ಷ ಒಂದು ರೀತಿಯಲ್ಲಿ ತೆರೆಮರೆಗೆ ಸರಿದಿದ್ದೆ. ಈ ನಡುವೆ ಒಮ್ಮೆ ನಾನು ಕಲ್ಲಡ್ಕದ ಖಾಸಗಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ನಾಲ್ಕು ಕಲ್ಲಿನ ಕಂಬಗಳು ಅವರಿಗೆ ’ಬೇರ’ ಚಿತ್ರ ನಿರ್ದೇಶಿಸಲು ಸ್ಫೂರ್ತಿ ನೀಡಿತು” ಎನ್ನುತ್ತಾರೆ ವಿನು ಬಳಂಜ.
ಕಲ್ಲು ಕಂಬಗಳೇ ಕೇಂದ್ರ ಪಾತ್ರಗಳೇ?
‘ಬೇರ’ ದ ಟ್ರೈಲರ್ ಬಿಡುಗಡೆ ಹಾಗೂ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಹಂಚಿಕೊಂಡ ವಿವರಗಳು ನಂತರ ಹುಟ್ಟಿರುವ ಈ ’”ದಿ ಕಾಶ್ಮೀರ್ ಫೈಲ್ಸ್”, “ಕೇರಳ ಸ್ಟೋರಿ” ಚಿತ್ರಗಳಿಂದ ವಿನು ಬಳಂಜ ಸ್ವಲ್ಪ ವಿಚಲಿತರಾಗಿದ್ದಾರೆ. ಯಾವುದೇ ಪ್ರಶ್ನೆಗೂ ಅಳೆದೂ-ತೂಗಿ ಉತ್ತರ ಕೊಡುತ್ತಾರೆ. “ನನ್ನ ಗೆಳಯನೊಬ್ಬ ನನ್ನನ್ನು ಕಲ್ಲಡ್ಕದ ಯಾಸಿರ್ ಕಲ್ಲಡ್ಕ ಎಂಬುವವರ ಖಾಸಗಿ ವಸ್ತು ಸಂಗ್ರಹಾಲಯಕ್ಕೆ ಕರೆದೊಯ್ದ. ಈ ವಸ್ತು ಸಂಗ್ರಹಾಲಯದ ಪ್ರವೇಶ ಭಾಗದಲ್ಲಿ ಎದುರಾಗುವ ಅಷ್ಟೇನೂ ಕಲಾತ್ಮಕವಲ್ಲದ, ಯಾವುದೇ ಸಾಮ್ರಾಜ್ಯದ ವಾಸ್ತುವಿಗೂ ಹೋಲಿಕೆ ಇರದ ಪುರಾತನ ಕಂಬಗಳು ನನ್ನ ಗಮನಸೆಳೆದು, ಆ ಕಲ್ಲಿನ ಕಂಬಗಳ ಹಿನ್ನೆಲೆಯಲ್ಲಿ ಹುಟ್ಟಿದ ಕಥೆ ’ಬೇರ’. ಈ ಕಂಭಗಳು ಯಾಸಿರ್ಗೆ ಸಿಕ್ಕ ಬಗ್ಗೆಯೇ ಒಂದು ಕಥೆ ಇದೆ. “ಈ ಕಂಬಗಳು ಕಲ್ಲಡ್ಕದ ನೆಟ್ಲಾ ಪ್ರದೇಶದಲ್ಲಿರುವ ಇಟಿಲಾಕ್ಷ ಸದಾಶಿವ ದೇವಾಲಯದ್ದು. ದೇವಸ್ಥಾನದ ಪುನರುಜ್ಚೀವನ ಕಾಮಗಾರಿ ಸಂದರ್ಭದಲ್ಲಿ ಈ ಕಂಬಗಳನ್ನು ತೆಗೆದು ಪಕ್ಕಕ್ಕಿಟ್ಟಿದ್ದರು. ಇಂಥ ವಸ್ತುಗಳಲ್ಲಿ ಆಸಕ್ತಿ ಇರುವ ನಾನು ಅವನ್ನು ದೇವಾಲಯದ ಮೊಕ್ತೇಸರರಿಂದ ಪಡೆದು ಇಲ್ಲಿ ತಂದಿಟ್ಟೆ” ಎನ್ನುತ್ತಾರೆ ಯಾಸಿರ್.
ಪಾತ್ರಗಳ ಧ್ವನಿ
‘ಬೇರ’ದ ಟ್ರೈಲರ್ನಲ್ಲಿ ಒಂದು ಪಾತ್ರ “ಈ ಕಂಬಗಳು ಮಿಸುಕಾಡಲೇ ಬಾರದು” ಎಂದರೆ. ಇನ್ನೊಂದು ಪಾತ್ರ; “ಈ ಕಂಬಗಳು ಇರಲೇಬಾರದು. ಅದರ ಮೇಲಿನ ದೀಪ ಉರಿಯಲೇ ಬಾರದು ಎನ್ನುತ್ತವೆ. ಇನ್ನೊಮ್ಮೆ “ನಾವು ಸತ್ತರೆ ಈ ಕಂಬಗಳು ಸಾವಿರ ವರ್ಷ ನಮ್ಮ ಕಥೆ ಹೇಳುತ್ವೆ.. ನನ್ನ ಸಾವು ನನ್ನ ಯಾಕೆ ಹಿಂಬಾಲಿಸುತ್ತಿದೆ ಕಾಂಪೌಂಡ್ನಲ್ಲಿರುವ ಕಂಬಗಳು ಉರಿತಿರೋ ದೀಪ” ಎಂಬ ಧ್ವನಿ. ಹೀಗೆ ಕಥೆ ಒಂದರ್ಥದಲ್ಲಿ ಕಂಬಗಳ ಸುತ್ತ ಸುತ್ತುವಂತೆ ಭಾಸವಾಗುತ್ತದೆ. ’ಮರ್ಚೆಂಟ್ ಆಫ್ ಡೆತ್’ ಟ್ಯಾಗ್ಲೈನ್ ಕುರಿತ ಕುತೂಲಕ್ಕೆ; “ವೈಯಕ್ತಿಕ ಲಾಭಕ್ಕಾಗಿ ಧರ್ಮವನ್ನು ವ್ಯಾಪಾರದ ವಸ್ತುವನ್ನಾಗಿ ಮಾಡಿಕೊಂಡಿರುವ ರಾಜಕೀಯ ನಾಯಕರು, ಅಮಾಯಕ, ಮುಗ್ಧ ಅಸಹಾಯಕ ಯುವಕರನ್ನು ಶೋಷಿಸುತ್ತಿದ್ದಾರೆ. ಯಾವ ತಾಯಿಯ ಮಕ್ಕಳೋ ಅಂತೂ ಈ ಧರ್ಮರಾಜಕಾರಣದ ಚದುರಂಗದಾಟದ ಕಾಯಿಗಳಾಗಿದ್ದಾರೆ. ಯಾವ ತಾಯ ಮಕ್ಕಳೂ ಕೂಡ ಇಲ್ಲಿ ಯಾರಿಂದಾಗ್ಲಿ ಸಾಯಬಾರದು. ಬದುಕುವುದಕ್ಕೆ ವ್ಯಾಪಾರ ಒಂದು ದಾರಿಯಾದರೆ, ಬದುಕು ಮುಗಿಸುವುದೂ ಕೂಡ ಒಂದು ವ್ಯಾಪಾರವಾಗಿದೆ. ಅಮ್ಮಂದಿರ ಮುಗ್ಧ ಮಕ್ಕಳು ಸಾಯುತ್ತಿದ್ದಾರೆ. ಅದು ಆಗಬಾರದು ಅನ್ನೋದು ಈ ಚಿತ್ರದ ಆಶಯ” ಎಂದು ಸೂಕ್ಷಮವಾಗಿ ಕಥಾ ಹಂದರದ ಬಗ್ಗೆ ವಿನು ಬಳಂಜ ಸೂಚಿಸುತ್ತಾರೆ.
ಸ್ಲೀಪರ್ ಸೆಲ್ ಕಥೆ ಕೂಡ
ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ “ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗಿದೆ” ಎಂದು ನಂಬಲಾಗಿರುವ ಕರಾವಳಿಯ ಪುಟ್ಟ ಊರು ಭಟ್ಕಳದಲ್ಲಿ ತಮಗರಿವಿಲ್ಲದಂತೆಯೇ ’ಸ್ಲೀಪರ್ ಸೆಲ್’ಗಳಾಗುತ್ತಿರುವ ಅಮಾಯಕರ ಬಗ್ಗೆ ಕೂಡ ಈ ಚಿತ್ರ ಸೂಚಿಸಿ ಅದರ ಪರಿಣಾಮಗಳ ಬಗ್ಗೆ ಮಾತನಾಡುತ್ತದೆ” ಎನ್ನುತ್ತಾರೆ ವಿನು ಬಳಂಜ. ಭಟ್ಕಳದ ಸ್ಲೀಪರ್ ಸೆಲ್ಗಳ ಬಗ್ಗೆ ಇತ್ತೀಚೆಗೆ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ಉಲ್ಲೇಖಿಸಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಬೇರ’ವನ್ನು ಹಿಂದೂ-ಮುಸ್ಲೀಂ ಧರ್ಮಗಳ ರಾಜಕೀಯ ನಾಯಕರು ಬಳಸಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಪ್ರಶ್ನಿಸಿದರೆ; “ಹೌದು ಜೀವಗಳು ರಾಜಕೀಯ ವ್ಯಾಪಾರದ ಚದುರಂಗದ ಕಾಯಿಗಳಾಗಿವೆ. ಎಲ್ಲ ಸಾವುಗಳು ಪ್ರಚಾರದ ವಸ್ತುಗಳಾಗುತ್ತವೆ. ಅಂಥವರು ಈ ಚಿತ್ರವನ್ನೂ ಬಳಸಿಕೊಳ್ಳಬಹುದು. ಈಗಾಗಲೇ ಕೆಲವರು ಕೆಲವು ಚಿತ್ರಗಳನ್ನು ಬಳಸಿಕೊಂಡಿದ್ಧಾರೆ. ’ಬೇರ’ದಲ್ಲಿ ಅವರು ನೆಪ ಹುಡುಕುವುದು ಕಷ್ಟವಾಗಬಹುದು. ಆದರೆ ಹುಡುಕೋರು ಹುಡುಕಿಯೇ ಹುಡುಕ್ತಾರೆ ಮತ್ತು ಬಳಸಿಕೊಳ್ತಾರೆ. ಏನೂ ಮಾಡೋಕೆ ಆಗೊಲ್ಲ. ಹಾಗಲ್ಲ ಎಂದು ನಾನು ನನ್ನ ನಿಲುವಿಗೆ ಖಂಡಿತ ಅಂಟಿಕೋಳ್ತೇನೆ. ನಮ್ಮ ಚಿತ್ರವನ್ನು ಯಾರೂ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳದಂತೆ ನಾವು ನಮ್ಮ ಕೈಲಾದ ಎಲ್ಲ ಪ್ರಯತ್ನ ಮಾಡುತ್ತೇವೆ” ಎನ್ನುವ ನಿರ್ದೇಶಕ ಕಲ್ಲಡ್ಕದಲ್ಲಿ ಚಿತ್ರೀಕರಿಸುವಾಗ ಅಡೆತಡೆ ಏನಾದರೂ..ಎಂದು ಕೇಳಿದರೆ. ಅವರಿಂದ ನೇರವಾಗಿ ಬರುವ ಉತ್ತರ ’ಇಲ್ಲ’ ಎಂದು ಅರ್ಥಗರ್ಭಿತವಾಗಿ ಮುಗುಳ್ನಗುತ್ತಾರೆ.
ಒಂದು ಸಂಗತಿಯಂತೂ ಸ್ಪಷ್ಟ. ಈ ಸಂದರ್ಭದಲ್ಲಿ ಇಂಥ ಸೂಕ್ಷ?ಮವಸ್ತುವನ್ನಾಧರಿಸಿ ಚಿತ್ರ ಮಾಡುವುದು ಸವಾಲಿನ ಕೆಲಸ. ಪ್ರೋಪಗಾಂಡಿಸ್ಟ್ ಚಿತ್ರವಾಗದಂತೆ ಎಚ್ಚರವಹಿಸಿ, ಮಾನವೀಯ ಮೌಲ್ಯಗಳನ್ನು ದೃಶ್ಯಗಳ ಸಂಕಲನದ ಮೂಲಕ ಹಿಡಿದಿಡಿವುದು ಅಷ್ಟು ಸುಲಭವಲ್ಲ. ಆದರೆ ಇಂಥ ವಸ್ತುವನ್ನು ಸಂವೇದನಾಶೀಲತೆಯಿಂದ ಭಾವೋದ್ವೇಗದ ಅಪಾಯದಿಂದ ಪಾರು ಮಾಡಿರುವ ಚಿತ್ರ ಪರಂಪರೆಯೇ ಇದೆ. ವಿನು ಬಳಂಜ ’ಬೇರ’ ಚಿತ್ರವನ್ನು ಎಲ್ಲ ಸೂಕ್ಷಮತೆಗಳಿಂದ ಮಾಡಿದ್ದಾರೊ, ಅಥವ ಭಾವೋದ್ವೇಗಕ್ಕೆ ಪ್ರೇಕ್ಷಕನ್ನು ತಳ್ಳುವ ಚಿತ್ರ ಮಾಡಿದ್ದಾರೋ ಎಂಬುದು ಚಿತ್ರ ಬಿಡುಗಡೆಯ ನಂತರವೇ ಅರಿವಾಗಲಿದೆ. ಅದಕ್ಕಾಗಿ ಇನ್ನೊಂದು ವಾರ ಕಾಯಬೇಕು.